ಏಣುಗಳು: ಪಕ್ಷೀಕೃತ ಪರ್ವತಗಳಲ್ಲಿನ ನೆರಿಗೆಗಳಲ್ಲಿರುವ ಗಟ್ಟಿಯಾದ ಶಿಲೆಗಳ ಮೇಲಿನ ಮೃದು ಶಿಲೆಗಳು ಹರಿಯುವ ನೀರಿನಿಂದ ಸವೆದು ನಶಿಸಿ ಹೋಗಲಾಗಿ ಉಳಿದು ತೋರುವ ಚೂಪಾದ ಶಿಖರವುಳ್ಳ ಬೆಟ್ಟದ ಬೆನ್ನೇರುಗಳು (ಹಾಗ್ ಬ್ಯಾಕ್ಸ್‌). ಅವುಗಳ ಒಂದು ಬದಿಯಲ್ಲಿ ವಾಲಿದ ಮುಖವೂ ಇನ್ನೊಂದು ಬದಿಯಲ್ಲಿ ಗಟ್ಟಿಯಾದ ಶಿಲೆಗಳಿಂದ ಭದ್ರವಾಗಿರಿಸಲ್ಪಟ್ಟ ಇಳಿಜಾರು ಭಾಗವೂ ಗೋಚರಿಸುತ್ತವೆ. ವಾಲಿಕೊಂಡ ಜಲಜಶಿಲೆಗಳಿಂದ ರಚಿತವಾದ ಎಲ್ಲ ಪಕ್ಷೀಕೃತ ಪರ್ವತಗಳ ಪಾಶರ್ವ್‌ಗಳಲ್ಲೂ ಏಣುಗಳನ್ನು ಕಾಣಬಹುದು. ಅಪಲೇಷಿಯನ್  ಮತ್ತು ರಾಕಿ ಪರ್ವತಗಳ ಅನೇಕ ಬೆಟ್ಟದ ಸಾಲುಗಳು ಏಣುಗಳಿಂದೊಡಗೂಡಿವೆ. ಪಶ್ಚಿಮ ಕೊಲರ್ಯಾಡೊ ಮೇಲಿರುವಂತೆ ಏಣುಗಳೇ ಬೇರೆಯಾಗಿ ಕಾಣುವ ದೃಶ್ಯಗಳು ಮಾತ್ರ ತೀರ ವಿರಳ. ಶುಷ್ಕ ಹವಾಮಾನದ ಪ್ರದೇಶದಲ್ಲಿ ಸವೆತದ ಮೂಲಕ ಶಿಥಿಲಗೊಳ್ಳುವ ಕಾರ್ಯ ನಿಧಾನವಾದುದರಿಂದಲೂ ಕಾಡುಗಳ ಅಭಾವದಿಂದಲೂ ಏಣುಗಳು ಅತ್ಯಂತ ಸ್ಫುಟವಾಗಿ ತೋರಿಬರುತ್ತವೆ.

ಭಾರತದಲ್ಲಿ ಸಿವಾಲಿಕ್ ಗುಡ್ಡಗಳ ಮುಂದುಗಡೆಯ ಶ್ರೇಣಿಯೂ ಅದಕ್ಕೂ ಹೆಚ್ಚಾಗಿ ಕಿರಿ ಹಿಮಾಲಯದ (ಹಿಮಾಚಲ) ಗುಡ್ಡಗಳೂ ಪುರ್ವದ ಬರೈಲ್ ಗುಡ್ಡಗಳೂ ಕಾಶ್ಮೀರದ ಪೀರ್ ಪಂಜಲ್ ಶ್ರೇಣಿಯೂ ಏಣುಗಳ ದೃಶ್ಯಗಳಿಂದ ಕೂಡಿವೆ.         (ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ